ಪಾರ್ನೆಲ್, ಚಾಲ್ರ್ಸ್ ಸ್ಟೂವರ್ಟ್
	1846-1891 ಐರಿಷ್ ರಾಷ್ಟ್ರ ನಾಯಕ. ಐರ್ಲೆಂಡಿನ ಸ್ವರಾಜ್ಯಕ್ಕಾಗಿ ಹೋರಾಟವನ್ನು ಸಂಘಟಿಸಿದ. ಸರ್ಕಾರದ ಕಲಾಪಗಳಿಗೆ ಅಡ್ಡಿಯನ್ನುಂಟುಮಾಡುವ ನೀತಿಯನ್ನನುಸರಿಸಿ ತನ್ನ ಜನಕ್ಕೆ ಹೆಚ್ಚುಹೆಚ್ಚು ಹಕ್ಕುಗಳನ್ನು ಪಡೆಯಲು ಯತ್ನಿಸಿದ. 1875ರಲ್ಲಿ ಪಾರ್ಲಿಮೆಂಟಿನ ಸದಸ್ಯನಾಗಿ ಆಯ್ಕೆಯಾಗಿದ್ದ. 1879ರಲ್ಲಿ ಈತ ರಾಷ್ಟ್ರೀಯ ಲ್ಯಾಂಡ್ ಲೀಗಿಗೂ 1880ರಲ್ಲಿ ಹೋಂ ರೂಲ್ ಪಕ್ಷಕ್ಕೂ ಅಧ್ಯಕ್ಷನಾದ. ಹೊಸ ಜಮೀನು ಅಧಿನಿಯಮದ ಜಾರಿಗೆ ಅಡ್ಡಿಯುಂಟುಮಾಡಿದನೆಂಬ ಆರೋಪದ ಮೇಲೆ ಸರ್ಕಾರ ಇವನನ್ನು 1881ರಲ್ಲಿ ದಸ್ತಗಿರಿ ಮಾಡಿತು. ಆದ್ದರಿಂದ ಇವನ ಜನಪ್ರಿಯತೆ ಅಧಿಕವಾಯಿತು. ಸೆರೆಮನೆಯಿಂದಲೇ ಇವನು ಚಳವಳಿಯನ್ನು ನಿರ್ದೇಶಿಸಿದ. ಲ್ಯಾಂಡ್ ಲೀಗ್ ಸಂಘವನ್ನು ನಿಷೇಧಿಸಿದ್ದಕ್ಕೆ ಪ್ರತಿಯಾಗಿ ಕರ ನಿರಾಕರಣೆಯನ್ನು ಬೋಧಿಸಿದ. ಎಲ್ಲ ಹಿಂಸಾತ್ಮಕ ಚಳವಳಿಯನ್ನು ವಿರೋಧಿಸಲೊಪ್ಪಿ ಜೈಲಿನಿಂದ ಬಿಡುಗಡೆ ಹೊಂದಿದ. 1882ರಲ್ಲಿ ಆದ ರಾಜಕೀಯ ಕೊಲೆಗಳಿಂದ ಇವನಿಗೆ ನಿರಾಶೆ ಉಂಟಾಯಿತು. ಕೊಲೆಗಳನ್ನು ಇವನು ಖಂಡಿಸಿದ. ಸರ್ಕಾರದ ಬಲಾತ್ಕಾರದ ಕ್ರಮಗಳನ್ನು ಇವನು ತೀವ್ರವಾಗಿ ವಿರೋಧಿಸಿದ್ದರಿಂದ 1885 ರಲ್ಲಿ ಗ್ಲ್ಯಾಡ್‍ಸ್ಟನ್ನನ ಸರ್ಕಾರಕ್ಕೆ ಸೋಲುಂಟಾಯಿತು. ಗ್ಲ್ಯಾಡ್‍ಸ್ಟನ್ ಮತ್ತೆ ಅಧಿಕಾರಕ್ಕೆ ಬಂದಾಗ ಪಾರ್ನೆಲನ ಪ್ರಭಾವ ಗರಿಷ್ಠವಾಯಿತು. ಐರಿಷ್ ಸ್ವರಾಜ್ಯ ಸ್ಥಾಪನೆಗಾಗಿ ಕ್ರಮ ತೆಗೆದುಕೊಳ್ಳಲು ಸರ್ಕಾರ ಒಪ್ಪಿಕೊಂಡಿತು. (1886) ಗೇಣಿದಾರರ ಪರಿಹಾರಕ್ಕಾಗಿ ಮಸೂದೆ ತರಬೇಕೆಂದು ಇವನು ಸರ್ಕಾರವನ್ನು ಒತ್ತಾಯಪಡಿಸಿದ.

ಅಪರಾಧ ಹಾಗೂ ಹಿಂಸಾಚಾರಕ್ಕೆ ಪ್ರೋತ್ಸಾಹ ನೀಡುತ್ತಿದ್ದನೆಂದು ಪಾರ್ನೆಲನನ್ನು ಟೀಕಿಸಿ ಟೈಮ್ಸ್ ಪತ್ರಿಕೆ ಲೇಖನಗಳನ್ನು ಪ್ರಕಟಿಸಿತು. ಹಿಂದೆ ಆಗಿದ್ದ ರಾಜಕೀಯ ಕೊಲೆಗಳು ಅಂಥ ಮಹಾಪರಾಧಗಳೇನೂ ಅಲ್ಲವೆಂದು ಪಾರ್ನೆಲ್ ಹೇಳಿದನೆಂಬ ಪತ್ರವೊಂದು ತನ್ನದಲ್ಲವೆಂದು ಇವನು ಕಾಮನ್ಸ್ ಸಭೆಯಲ್ಲಿ ವಾದಿಸಿದ. ಇದು ಸುಳ್ಳು ಪತ್ರವೆಂಬುದು ಸಾಬೀತಾಗಿ, ಉಚ್ಛನ್ಯಾಯಾಲಯದ ನ್ಯಾಯಮೂರ್ತಿಗಳ ವಿಶೇಷ ಆಯೋಗ ಇವನು ನಿರಪರಾಧಿಯೆಂದು ತೀರ್ಪಿತ್ತಿತು (1890). ರಿಚರ್ಡ್ ಪಿಗಟ್ ಎಂಬುವನು ಇದನ್ನು ಸೃಷ್ಟಿಸಿ ಟೈಮ್ಸ್ ಪತ್ರಿಕೆಗೆ ಮಾರಾಟ ಮಾಡಿದ್ದ. ಹಿಂದೆ ತನ್ನ ಅನುಯಾಯಿಯಾಗಿದ್ದವನೊಬ್ಬನ ಪತ್ನಿಯೊಂದಿಗೆ ಪಾರ್ನೆಲ್ ಆಕ್ರಮ ಸಂಬಂಧ ಹೊಂದಿದ್ದನೆಂಬುದು ರುಜುವಾತಾದಾಗ (1890). ಇವನ ಕೀರ್ತಿಸೌಧ ಕುಸಿದುಬಿತ್ತು. ಸಂಸತ್ತಿನಲ್ಲಿ ಅನೇಕ ಸದಸ್ಯರು ಪಾರ್ನೆಲನನ್ನು ತೊರೆದರು. 1891 ರ ಅಕ್ಟೋಬರ್ 6 ರಂದು ಪಾರ್ನೆಲ್ ತೀರಿಕೊಂಡ.
	(ಎಚ್.ಆರ್.ಆರ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ